ಸಮೂಹ ಸನ್ನಿ ಎನ್ನುವುದು ನಮ್ಮ ದೇಶದಲ್ಲಿ ಬಲು ಬೇಗ ಹಬ್ಬಿಕೊಳ್ಳುತ್ತದೆ. ಆಗ ಗಣೇಶನ ವಿಗ್ರಹ ಹಾಲು ಕುಡಿಯುತ್ತದಂತೆ ಎಂಬ ಸುದ್ದಿ ಅದೆಷ್ಟು ಪ್ರಚಾರ ಪಡೆದಿತ್ತೆಂದರೆ ನಾಲ್ಕು ದಿನ ಪತ್ರಿಕೆಗಳಿಗೆ ಬೇರೆ ಸುದ್ದಿಯೇ ಇರಲಿಲ್ಲ. ಜನರೂ ಅಷ್ಟೇ ಮೌಢ್ಯದಿಂದ ವರ್ತಿಸಿದ್ದರು. ಅದೇನೋ ಅಂಥ ಅಪಾಯಕಾರಿ, ಸಮಾಜ ವಿರೋಧಿ ಚಟುವಟಿಕೆ ಆಗಿರಲಿಲ್ಲ. ಆದರೆ ಗ್ಯಾಂಗ್ ರೇಪ್? ಹೆಣ್ಣಿನ ಮನಸು, ದೇಹದ ಜೊತೆಗಿನ ಚೆಲ್ಲಾಟ. ಅವಳ ಆತ್ಮಗೌರವಕ್ಕೆ ಮಾಡುವ ಹೀನ ಅವಮಾನ. ಇದನ್ನೂ ಜನ ಮರುಳಿಗೆ ಬಿದ್ದು ಮಾಡುತ್ತಾರೆಯೆ?
ಅಸಲೀ ವಿಚಾರ ಏನೆಂದರೆ ನಮ್ಮ ದೇಶ ಜಗತ್ತಿನಲ್ಲೇ ಅತ್ಯಾಚಾರದಲ್ಲಿ ಮೂರನೇ ಸ್ಥಾನದಲ್ಲಿದೆ. ಇಲ್ಲಿ ದಿನಾಲೂ ಒಂದಲ್ಲ ಒಂದು ಕಡೆ ಅತ್ಯಾಚಾರ ನಡೆಯುತ್ತಲೇ ಇರುತ್ತದೆ. ನಡೆದಿದ್ದೆಲ್ಲ ಇಷ್ಟು ದಿನ ಮಾಧ್ಯಮಗಳಲ್ಲಿ ವರದಿಯಾಗುತ್ತಿರಲಿಲ್ಲ. ಆದರೆ ಮೊನ್ನೆಯ ದೆಹಲಿಯ ಪ್ರಕರಣ ಹುಟ್ಟಿಸಿದ ಪ್ರಚಾರ ಹಾಗೂ ಕಂಪನದಿಂದ ಇದರ ಪ್ರಮಾಣದಲ್ಲಿ ಅಲ್ಪ ಏರಿಕೆಯೂ ಆಗಿದೆ. ಮಾಧ್ಯಮಗಳೂ ಅತಿಯಾಗಿ ಪ್ರಚಾರ ಕೊಡುತ್ತಿವೆ.
ಒಂದು ಅತ್ಯಾಚಾರ ಪ್ರಕರಣ ಇಡೀ ರಾಜಧಾನಿಯನ್ನೇ ಅಲ್ಲಾಡಿಸಿ, ಕೊನೆಗೆ ಪ್ರಧಾನಮಂತ್ರಿಯವರೇ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಸಂಗ ಸೃಷ್ಟಿಯಾಗಿದ್ದು ದೇಶದ ಇತಿಹಾಸದಲ್ಲಿ ಬಹುಶಃ ಇದೇ ಮೊದಲಿರಬಹುದು. ಇಡೀ ಪ್ರಕರಣಕ್ಕೆ ಯುವ ಜನತೆ ಸ್ಪಂದಿಸಿದ ರೀತಿ ನಿಜಕ್ಕೂ ಶ್ಲಾಘನೀಯ. ವಿರೋಧ ಪ್ರತಿಭಟನೆಗಳು ಹಿಂಸೆಗೆ ತಿರುಗಿ ಕೊನೆಗೆ ಒಬ್ಬ ಪೋಲಿಸ್ ಪ್ರಾಣ ಕಳೆದುಕೊಂಡರು. ಅದು ಆಗಬಾರದಿತ್ತು. ಆದರೆ ಇಂಥ ಕೃತ್ಯಗಳನ್ನು ಬಾಯಿ ಮುಚ್ಚಿಕೊಂಡು ಸಹಿಸುವುದಿಲ್ಲ ಎಂಬ ಸಂದೇಶವನ್ನು ಸರ್ಕಾರಕ್ಕೆ ರವಾನಿಸಿದ್ದಂತೂ ಮನಸಿಗೆ ತುಂಬ ಹಿತ ತಂದಿದೆ.
ಇಡೀ ಘಟನೆಯನ್ನು ಮಾಧ್ಯಮದವರು ನಿಭಾಯಿಸಿದ ರೀತಿಗೆ ದೂರಬೇಕೊ ಅಥವಾ ಅವರು ಮಾಡುತ್ತಿರುವುದು ಸರಿ ಎಂದು ಸುಮ್ಮನಿರಬೇಕೋ ಅರ್ಥವಾಗುತ್ತಿಲ್ಲ. ಯುವತಿಯ ಸ್ಥಿತಿ ಬಗ್ಗೆ ಇಡೀ ದೇಶಕ್ಕೆ ತಿಳಿಸಿದ್ದು ಮಾಧ್ಯಮ. ಇದಕ್ಕೆ ಜನ ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ಸರಕಾರಕ್ಕೆ ತಿಳಿಸಿ ಬಿಸಿ ಮುಟ್ಟಿಸಿದ್ದೂ ಮಾಧ್ಯಮ. ಅವೆರಡು ಜವಾಬ್ದಾರಿಯನ್ನೂ ಅದು ಸೂಕ್ತವಾಗಿ ನಿರ್ವಹಿಸಿದೆ. ಆದರೆ ಘಟನಾನಂತರ ಅದು ವರ್ತಿಸುತ್ತಿರುವ ರೀತಿ ಎಷ್ಟು ಸರಿ? ಒಂದು ವಿರೋಧ, ಪ್ರತಿಭಟನೆಯಾಗಿ, ಚಳುವಳಿಯಾಗಿ ಬದಲಾಗುವಲ್ಲಿ ಮಾಧ್ಯಮದ ಪಾತ್ರ ತುಂಬ ಇದೆ.ವಸ್ತುಸ್ಥಿತಿಯನ್ನು ಯಥಾವತ್ತಾಗಿ ಚಿತ್ರಿಸಿ ದೇಶದ ಜನತೆಗೆ ಮುಟ್ಟಿಸುವ ಅವರ ಕಾರ್ಯ ಯಾವತ್ತಿಗೂ ಅಭಿನಂದನೀಯ. ಆದರೆ ಸತ್ಯವನ್ನು ಬಿಂಬಿಸಲು ಹೋಗಿ ಅವನ್ನು ಅತಿಯಾಗಿ ವಿಜೃಂಭಿಸುವುದರಿಂದ ಅದು ಬೇರೆ ರೀತಿಯ ಪರಿಣಾಮವನ್ನೂ ಬೀರುತ್ತಿದೆಯೆ ಎಂಬ ಸಂಶಯ ಕಾಡುತ್ತಿದೆ. ಕೇಂದ್ರ ಗೃಹಮಂತ್ರಿಗಳು, ಪ್ರಧಾನಮಂತ್ರಿಗಳು ಮಹಿಳೆಯರ ರಕ್ಷಣೆಗೆ ಬಿಗಿ ಕಾನೂನು ತರುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ಉಳಿದ ಅತ್ಯಾಚಾರ ಪ್ರಕರಣಗಳ ಶೀಘ್ರ ತನಿಖೆಗೆ ಆದೇಶಿಸಿದ್ದಾರೆ. ಆರೋಪಿಗಳ ಬಂಧನವೂ ಆಗಿದೆ. ಇಷ್ಟೆಲ್ಲದರ ನಡುವೆಯೂ ಗ್ಯಾಂಗ್ ರೇಪಿನ ಪಿಡುಗು ಹಬ್ಬುತ್ತಿದೆ ಅಂದರೆ ಏನರ್ಥ? ಕಿಡಿಗೇಡಿಗಳನ್ನು ಇನ್ನಷ್ಟು ಪ್ರೇರೇಪಿಸುತ್ತಿರುವುದು ಯಾವುದು? ಇದಕ್ಕೆಲ್ಲ ಮಾಧ್ಯಮವೇ ನೇರ ಹೊಣೆ ಎಂದು ಹೇಳುತ್ತಿಲ್ಲ. ಆದರೆ ಇವತ್ತಿನ ಯುಗದಲ್ಲಿ ಜನರ ಮನಸನ್ನು ನೇರವಾಗಿ
ಎಲ್ಲಿ? ಏನು? ಹೇಗೆ? ಯಾವಾಗ? ಇವು ಜರ್ನಲಿಸಮ್ನಲ್ಲಿ ಮೊದಲು ಕಲಿಸುವ ಅಂಶಗಳು. ಈ ಅಂಶಗಳನ್ನು ಅತ್ಯಾಚಾರದಂಥ ಸುದ್ದಿಗಳಲ್ಲೂ ಅಳವಡಿಸಿ, ಇಡೀ ಘಟನೆಯನ್ನು ಹಂತ ಹಂತವಾಗಿ ವಿವರಿಸಿ ಬರೆಯಲಾಗುತ್ತದೆ. ಮಾಧ್ಯಮಗಳು ಹೀಗೆ ಸವಿವರವಾಗಿ ಅತ್ಯಾಚಾರ ಸುದ್ದಿಯನ್ನು ಬಹಿರಂಗಪಡಿಸುವುದರಿಂದ ಇನ್ನಷ್ಟು ಅತ್ಯಾಚಾರಿಗಳಿಗೆ ದಾರಿ ಹೇಳಿಕೊಟ್ಟಂತಾಗುವುದಿಲ್ಲವೆ? ಇತ್ತೀಚೆಗೆ ಜನರು ನ್ಯೂಸ್ಪೇಪರನ್ನು ಪೋರ್ನೋಗ್ರಫಿಯಂತೆ ಓದುತ್ತಿದ್ದಾರೆ. ಅವರು ಅದನ್ನು ಎಂಜಾಯ್ ಮಾಡುತ್ತಿದ್ದಾರೆ. ಇದ್ಯಾಕೆ ಮಾಧ್ಯಮಗಳಿಗೆ ಅರ್ಥವಾಗುತ್ತಿಲ್ಲ? ಮಾಧ್ಯಮದವರು ಕೊಡುವ ಸರಕು ಜನರ ಮನಸಿನೊಳಗೆ ಎಂಥ ಪ್ರಭಾವ ಬೀರುತ್ತಿದೆ ಎಂಬ ಕಲ್ಪನೆ ಬೇಡವೆ?
ಪ್ರಚಾರ ಬಯಸುವ ಕೆಲವು ಮನಸುಗಳು ಏನನ್ನು ಮಾಡಲೂ ಹಿಂಜರಿಯುವುದಿಲ್ಲ.ಅತ್ಯಾಚಾರಿ ಎನಿಸಿಕೊಂಡರೂ ಸರಿ. ಒಂದಷ್ಟು ದಿನ ಲೈಮ್ಲೈಟಿನಲ್ಲಿ ಇರಬಹುದಲ್ಲ ಎಂದು ಯೋಚಿಸುತ್ತಾರೆ. ಹಿಂದೊಮ್ಮೆ ಟ್ಯಾಬುಲಾಯ್ಡ್ ಪತ್ರಿಕೆಗಳು ರೌಡಿಸಮ್ ಅನ್ನು ಅತಿಯಾಗಿ ಮೆರೆಸಿದವು. ಪರಿಣಾಮ ಏನಾಯಿತು? ಎಷ್ಟೊಂದು ಯುವ ಮನಸ್ಸುಗಳು ರೌಡಿಸಮ್ಮಿಗೆ ಇಳಿದವು. ಪುಡಿ, ಪುಡಿ ರೌಡಿಗಳು ಪ್ರಚಾರ ಗಿಟ್ಟಿಸಿಕೊಂಡು ದೊಡ್ಡವರಾದರು. ಪತ್ರಿಕೆಗಳು ಅವರ ಬಗ್ಗೆ ಪುಂಖಾನುಪುಂಖವಾಗಿ ಬರೆದವು. ಅವರದೇ ಸಿನಿಮಾಗಳು ಓಡಿದವು. ಪರಿಣಾಮ ರೌಡಿಸಮ್ ಬೃಹದಾಕಾರವಾಗಿ ಬೆಳೆದು ಬಿಟ್ಟಿತು. ಈಗಲೂ ಕೂಡ ಅಂಥದೇ ಅಪಾಯ ಎದುರಾದರೆ ಅಚ್ಚರಿಯಿಲ್ಲ.
ಹೀಗಾಗಿ ಮಾಧ್ಯಮಗಳೇ ನಮಗೆ ಅತ್ಯಾಚಾರದ ಸುದ್ದಿಗಳು ಸಾಕಾಗಿದೆ. ನಮಗದು ಬೇಡ. ಟಿವಿಯಲ್ಲೂ ಬೇಡ,